1. {#1ಯೆಹೂದ್ಯರಂತಿರಬೇಡಿ } [PS]ಸಹೋದರ ಸಹೋದರಿಯರೇ, ಮೋಶೆಯನ್ನು ಅನುಸರಿಸಿದ ನಮ್ಮ ಪಿತೃಗಳಿಗೆ ಏನು ಸಂಭವಿಸಿತೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರೆಲ್ಲರೂ ಮೋಡದ ಕೆಳಗಿದ್ದರು; ಸಮುದ್ರದ ಮೂಲಕ ನಡೆದುಕೊಂಡು ಹೋದರು;
2. ಮೋಶೆಯ ಶಿಷ್ಯರಾಗುವುದಕ್ಕಾಗಿ ಮೋಡದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನ ಹೊಂದಿದರು;
3. ಒಂದೇ ಆತ್ಮಿಕ ಆಹಾರವನ್ನು ಊಟ ಮಾಡಿದರು;
4. ತಮ್ಮೊಂದಿಗಿದ್ದ ಆತ್ಮಿಕ ಬಂಡೆಯ ನೀರನ್ನು ಕುಡಿದರು. ಆ ಬಂಡೆಯೇ ಕ್ರಿಸ್ತನು.
5. ಆದರೂ ಅವರಲ್ಲಿ ಅನೇಕರು ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಅವರು ಮರುಭೂಮಿಯಲ್ಲಿ ಕೊಲ್ಲಲ್ಪಟ್ಟರು. [PE]
6. [PS]ಅವರು ಮಾಡಿದಂತೆ ನಾವು ಕೆಟ್ಟವುಗಳನ್ನು ಆಶಿಸಬಾರದೆಂಬುದಕ್ಕೆ ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ.
7. ಅವರಲ್ಲಿ ಕೆಲವರು ಮಾಡಿದಂತೆ ನೀವು ವಿಗ್ರಹಗಳನ್ನು ಪೂಜಿಸಬೇಡಿ. “ಜನರು ತಿನ್ನಲು, ಕುಡಿಯಲು ಕುಳಿತುಕೊಂಡರು; ನೃತ್ಯ ಮಾಡಲು ಎದ್ದುನಿಂತರು”[✡ ಉಲ್ಲೇಖನ: ವಿಮೋಚನ. 32:6. ] ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
8. ಅವರಲ್ಲಿ ಕೆಲವರು ಮಾಡಿದಂತೆ ನಾವು ಲೈಂಗಿಕ ಪಾಪಗಳನ್ನು ಮಾಡಬಾರದು. ಅವರಲ್ಲಿ ಇಪ್ಪತ್ತಮೂರು ಸಾವಿರ ಮಂದಿ ತಮ್ಮ ಆ ಪಾಪದ ಫಲವಾಗಿ ಒಂದೇ ದಿನದಲ್ಲಿ ಸತ್ತುಹೋದರು.
9. ಅವರಲ್ಲಿ ಕೆಲವರು ಮಾಡಿದಂತೆ ನಾವು ಪ್ರಭುವನ್ನು ಪರೀಕ್ಷಿಸಬಾರದು. ಅದರ ಫಲವಾಗಿ ಅವರು ಹಾವುಗಳಿಂದ ಮರಣಹೊಂದಿದರು.
10. ಅವರಲ್ಲಿ ಕೆಲವರು ಮಾಡಿದಂತೆ ಗುಣುಗುಟ್ಟಬೇಡಿ. ಆ ಜನರು ಸಂಹಾರಕ ದೂತನಿಂದ ಕೊಲ್ಲಲ್ಪಟ್ಟರು. [PE]
11. [PS]ಆ ಜನರಿಗೆ ಸಂಭವಿಸಿದ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ನಮ್ಮನ್ನು ಎಚ್ಚರಿಸುವುದಕ್ಕಾಗಿ ಆ ಸಂಗತಿಗಳನ್ನು ಬರೆದಿಡಲಾಗಿದೆ. ಈಗ ನಾವು ಯುಗದ ಅಂತಿಮ ಕಾಲದಲ್ಲಿ ಜೀವಿಸುತ್ತಿದ್ದೇವೆ.
12. ಆದ್ದರಿಂದ ತಾನು ದೃಢವಾಗಿ ನಿಂತಿದ್ದೇನೆ ಎಂದು ಯೋಚಿಸುವ ವ್ಯಕ್ತಿಯು ಬೀಳದಂತೆ ಎಚ್ಚರಿಕೆಯಿಂದಿರಬೇಕು.
13. ಎಲ್ಲಾ ಜನರಿಗೆ ಬರುವಂತೆ ನಿಮಗೂ ಶೋಧನೆಗಳು ಬರುತ್ತವೆ. ಆದರೆ ದೇವರು ನಂಬಿಗಸ್ತನಾಗಿದ್ದಾನೆ. ನೀವು ಸಹಿಸಿಕೊಳ್ಳಲಾರದ ಶೋಧನೆಯನ್ನು ಆತನು ನಿಮಗೆ ಬರಗೊಡಿಸುವುದಿಲ್ಲ. ಶೋಧನೆಗಳು ಬಂದಾಗ, ಅವುಗಳಿಂದ ಪಾರಾಗುವ ಮಾರ್ಗವನ್ನು ಸಹ ದೇವರು ನಿಮಗೆ ಒದಗಿಸುತ್ತಾನೆ. ಆಗ ನೀವು ಅದನ್ನು ಸಹಿಸಿಕೊಳ್ಳುವುದಕ್ಕೆ ಶಕ್ತರಾಗುವಿರಿ. [PE]
14. [PS]ಆದ್ದರಿಂದ, ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಗಳ ಪೂಜೆಯ ಬಗ್ಗೆ ಯೋಚಿಸಲೂಬೇಡಿ.
15. ನೀವು ಬುದ್ಧಿವಂತರೆಂದು ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾನು ಹೇಳುವುದನ್ನು ಸ್ವತಃ ನೀವೇ ವಿಚಾರಣೆ ಮಾಡಿ.
16. ನಾವು ದ್ರಾಕ್ಷಾರಸದ ಪಾತ್ರೆಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಕುಡಿಯುವಾಗ ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಲಿಲ್ಲವೇ? ನಾವು ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಲಿಲ್ಲವೇ?
17. ರೊಟ್ಟಿಯು ಒಂದೇ. ಆದ್ದರಿಂದ ನಮ್ಮಲ್ಲಿ ಅನೇಕರಿದ್ದರೂ ನಾವು ಒಂದೇ ದೇಹವಾಗಿದ್ದೇವೆ. ಯಾಕೆಂದರೆ ನಾವೆಲ್ಲಾ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಳ್ಳುತ್ತೇವೆ. [PE]
18. [PS]ಇಸ್ರೇಲ್ ಜನರ ಬಗ್ಗೆ ಯೋಚಿಸಿ. ಯಜ್ಞವಾಗಿ ಅರ್ಪಿತವಾದುದನ್ನು ತಿನ್ನುವ ಆ ಜನರು ಯಜ್ಞವೇದಿಕೆಯಲ್ಲಿ ಪಾಲುಗಾರರಾಗಿಲ್ಲವೇ?
19. ವಿಗ್ರಹಕ್ಕೆ ಅರ್ಪಿತವಾದ ಆಹಾರಪದಾರ್ಥವು ಮುಖ್ಯವಾದದ್ದೆಂದು ನಾನು ಹೇಳುತ್ತಿಲ್ಲ. ಅಲ್ಲದೆ ವಿಗ್ರಹವು ಮುಖ್ಯವಾದದ್ದು ಎಂಬ ಅಭಿಪ್ರಾಯವೂ ನನಗಿಲ್ಲ.
20. ನಾನು ಹೇಳುತ್ತಿರುವುದೇನೆಂದರೆ, ಜನರು ವಿಗ್ರಹಗಳಿಗೆ ಅರ್ಪಿಸಿದ ಪದಾರ್ಥಗಳು ದೆವ್ವಗಳಿಗೆ ಅರ್ಪಿತವಾದುವುಗಳೇ ಹೊರತು ದೇವರಿಗಲ್ಲ. ನೀವು ದೆವ್ವಗಳೊಂದಿಗೆ ಯಾವ ವಿಷಯದಲ್ಲಿಯೂ ಪಾಲು ಹೊಂದಬಾರದೆಂಬುದು ನನ್ನ ಆಸೆ.
21. ನೀವು ಪ್ರಭುವಿನ ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾಗದು. ಪ್ರಭುವಿನ ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟ ಮಾಡಲಾರಿರಿ.
22. ಪ್ರಭುವಿಗೆ ಅಸೂಯೆಯನ್ನು ಉಂಟುಮಾಡಬೇಕೆಂದಿದ್ದೀರೋ? ಆತನಿಗಿಂತಲೂ ನಾವು ಬಲಿಷ್ಠರಾಗಿದ್ದೇವೋ? ಇಲ್ಲ! [PE]
23. {#1ನಿಮ್ಮ ಸ್ವತಂತ್ರ ದೇವರ ಮಹಿಮೆಗೋಸ್ಕರ } [PS]“ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ನಾವು ಮಾಡುವ ಕಾರ್ಯಗಳೆಲ್ಲಾ ಒಳ್ಳೆಯವೆಂದು ಹೇಳುವುದು ಸರಿಯಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ಕೆಲವು ಕಾರ್ಯಗಳು ಬೇರೆಯವರ ಅಭಿವೃದ್ಧಿಗೆ ಸಹಾಯಕವಾಗಿರುವುದಿಲ್ಲ.
24. ಪ್ರತಿಯೊಬ್ಬನೂ ತನಗೆ ಮಾತ್ರ ಹಿತಕರವಾದ ಕಾರ್ಯಗಳನ್ನು ಮಾಡದೆ ಬೇರೆಯವರಿಗೂ ಹಿತಕರವಾದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು. [PE]
25. [PS]ಮಾಂಸದ ಮಾರುಕಟ್ಟೆಯಲ್ಲಿ ಮಾರುವ ಯಾವ ಮಾಂಸವನ್ನಾದರೂ ತಿನ್ನಿರಿ. ನೀವು ತಿನ್ನಬಾರದೆಂದು ಯೋಚಿಸುವ ಮಾಂಸದಂತೆ ಅದು ತೋರಿದರೂ ಆ ಮಾಂಸದ ಬಗ್ಗೆ ಯಾವ ಪ್ರಶ್ನೆಗಳನ್ನೂ ಕೇಳಬೇಡಿರಿ.
26. ನೀವು ಅದನ್ನು ತಿನ್ನಿರಿ. ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಪ್ರಭುವಿನದಾಗಿದೆ.”[✡ ಉಲ್ಲೇಖನ: ಕೀರ್ತನೆ. 24:1; 50:12; 89:11. ] [PE]
27. [PS]ಕ್ರಿಸ್ತ ವಿಶ್ವಾಸಿಯಲ್ಲದ ಒಬ್ಬನು ನಿಮ್ಮನ್ನು ಊಟಕ್ಕೆ ಆಹ್ವಾನಿಸಿದರೆ, ಹೋಗುವುದಕ್ಕೆ ನಿಮಗೆ ಇಷ್ಟವಿದ್ದರೆ, ಅವನು ನಿಮಗೆ ಏನು ಬಡಿಸಿದರೂ ತಿನ್ನಿರಿ. ನೀವು ಆ ಪದಾರ್ಥವನ್ನು ತಿನ್ನಬೇಕೇ ಅಥವಾ ತಿನ್ನಬಾರದೇ ಎಂದು ನಿರ್ಧರಿಸಲು ಪ್ರಶ್ನೆಗಳನ್ನು ಕೇಳಬೇಡಿ.
28. ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು.
29. ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು.
30. ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿ ಊಟಮಾಡಿದ ಪದಾರ್ಥದಿಂದಾಗಿ ಖಂಡನೆಗೆ ಗುರಿಯಾಗಲು ನನಗೆ ಇಷ್ಟವಿಲ್ಲ. [PE]
31. [PS]ಆದ್ದರಿಂದ ನೀವು ತಿಂದರೂ ಕುಡಿದರೂ ಏನೇ ಮಾಡಿದರೂ ದೇವರ ಮಹಿಮೆಗಾಗಿ ಅದನ್ನು ಮಾಡಿರಿ.
32. ಇತರ ಜನರು ಅಂದರೆ ಯೆಹೂದ್ಯರಾಗಲಿ ಗ್ರೀಕರಾಗಲಿ ಅಥವಾ ದೇವರ ಸಭೆಯವರಾಗಲಿ ತಪ್ಪುಮಾಡಲು ಕಾರಣವಾಗುವಂಥದ್ದನ್ನು ನೀವೆಂದಿಗೂ ಮಾಡಬೇಡಿರಿ.
33. ನಾನು ಸಹ ಹಾಗೆಯೇ ಮಾಡುತ್ತೇನೆ. ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ. ನನಗೆ ಹಿತಕರವಾದದ್ದನ್ನು ಮಾಡಲು ಇಷ್ಟಪಡದೆ ಬಹು ಜನರಿಗೆ ಹಿತಕರವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಅಪೇಕ್ಷೆ. [PE]