1. {#1ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು } [PS]ಇಸ್ರೇಲಿನ ಜನರು ಈಜಿಪ್ಟನ್ನು ಬಿಟ್ಟ ನಾನೂರ ಎಂಭತ್ತನೆಯ ವರ್ಷದಲ್ಲಿ ಅಂದರೆ ರಾಜನಾದ ಸೊಲೊಮೋನನು ಇಸ್ರೇಲನ್ನು ಆಳಲಾರಂಭಿಸಿದ ನಾಲ್ಕನೆಯ ವರ್ಷದಲ್ಲಿ ದೇವಾಲಯದ ನಿರ್ಮಾಣವು ಆರಂಭಗೊಂಡಿತು. ಅದು ವರ್ಷದ ಎರಡನೆಯ ತಿಂಗಳಾದ ಜೀವ್ (ವೈಶಾಖ) ತಿಂಗಳಲ್ಲಿ ಆರಂಭಗೊಂಡಿತು.
2. ದೇವಾಲಯವು ತೊಂಭತ್ತು ಅಡ್ಡಿ ಉದ್ದ, ಮೂವತ್ತು ಅಡಿ ಅಗಲ ಮತ್ತು ನಲವತ್ತೈದು ಅಡಿ ಎತ್ತರವಾಗಿತ್ತು.
3. ದೇವಾಲಯದ ಮುಂದಿನ ಮಂಟಪವು ಮೂವತ್ತು ಅಡಿ ಉದ್ದ ಮತ್ತು ನಲವತ್ತೈದು ಅಡಿ ಅಗಲವಾಗಿತ್ತು. ಮುಂದಿನ ಮಂಟಪವು ದೇವಾಲಯದ ಮುಖ್ಯಸ್ಥಳದುದ್ದಕ್ಕೂ ವ್ಯಾಪಿಸಿತ್ತು. ಮಂಟಪದ ಉದ್ದವು ದೇವಾಲಯದ ಅಗಲಕ್ಕೆ ಸಮನಾಗಿತ್ತು.
4. ದೇವಾಲಯದಲ್ಲಿ ಕಿರಿದಾದ ಕಿಟಿಕಿಗಳಿದ್ದವು. ಈ ಕಿಟಕಿಗಳು ಹೊರಗಡೆಯಲ್ಲಿ ಕಿರಿದಾಗಿಯೂ ಮತ್ತು ಒಳಗಡೆ ದೊಡ್ಡದಾಗಿಯೂ ಇದ್ದವು.
5. ನಂತರ ಸೊಲೊಮೋನನು ದೇವಾಲಯದ ಗೋಡೆಯ ಸುತ್ತಲೂ ಸಾಲಾಗಿ ಕೊಠಡಿಗಳನ್ನು ನಿರ್ಮಿಸಿದನು. ಈ ಕೊಠಡಿಗಳನ್ನು ಒಂದರ ಮೇಲೆ ಮತ್ತೊಂದನ್ನು ಕಟ್ಟಿಸಿದನು. ಈ ಸಾಲು ಕೊಠಡಿಗಳು ಮೂರು ಅಂತಸ್ತುಗಳನ್ನು ಹೊಂದಿದ್ದವು.
6. ಈ ಕೊಠಡಿಗಳು ದೇವಾಲಯದ ಗೋಡೆಯನ್ನು ಸ್ಪರ್ಶಿಸಿದರೂ, ಅವುಗಳ ತೊಲೆಗಳು ಗೋಡೆಯಲ್ಲಿ ಸೇರಿಕೊಂಡಿರಲಿಲ್ಲ. ಆ ದೇವಾಲಯದ ಗೋಡೆಯ ಮೇಲ್ಭಾಗವು ತೆಳುವಾಗಿತ್ತು. ಆ ಕೊಠಡಿಗಳ ಒಂದು ಕಡೆಯ ಗೋಡೆಯು, ಅದರ ಕೆಳಭಾಗದ ಗೋಡೆಗಿಂತ ತೆಳುವಾಗಿತ್ತು. ಕೆಳ ಅಂತಸ್ತಿನ ಕೊಠಡಿಗಳ ಅಗಲ ಏಳುವರೆ ಅಡಿಗಳು. ಮಧ್ಯದ ಅಂತಸ್ತಿನ ಕೊಠಡಿಗಳ ಅಗಲ ಒಂಭತ್ತು ಅಡಿಗಳು. ಅದರ ಮೇಲಿನ ಕೊಠಡಿಗಳ ಅಗಲ ಹತ್ತೂವರೆ ಅಡಿಗಳು.
7. ಈ ಗೋಡೆಗಳನ್ನು ಕಟ್ಟಲು ಕೆಲಸಗಾರರು ದೊಡ್ಡದೊಡ್ಡ ಕಲ್ಲುಗಳನ್ನು ಬಳಸಿದ್ದರು. ಕಲ್ಲುಗಣಿಯಿಂದ ಕಲ್ಲುಗಳನ್ನು ಹೊರಗೆ ತೆಗೆಯುವಾಗಲೇ ಕೆಲಸಗಾರರು ಈ ಕಲ್ಲುಗಳನ್ನು ಕೆತ್ತಿದ್ದರು. ಆದ್ದರಿಂದ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಉಪಕರಣಗಳ ಶಬ್ದವು ದೇವಾಲಯದಲ್ಲಿ ಕೇಳಿಸುತ್ತಿರಲಿಲ್ಲ. [PE]
8.
9. [PS]ಕೆಳಅಂತಸ್ತಿನ ಕೊಠಡಿಗಳ ಪ್ರವೇಶವು ದೇವಾಲಯದ ದಕ್ಷಿಣದ ಕಡೆಗಿತ್ತು. ಎರಡನೆಯ ಅಂತಸ್ತಿನ ಕೊಠಡಿಗಳಿಗೆ ಹೋಗುವ ಮೆಟ್ಟಿಲುಗಳು ಒಳಗಡೆಯಿದ್ದು, ಅಲ್ಲಿಂದ ಮೂರನೆಯ ಅಂತಸ್ತಿನ ಕೊಠಡಿಗಳಿಗೂ ಹೋಗಬಹುದಾಗಿತ್ತು. [PE][PS]ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು. ದೇವಾಲಯದೊಳಗಿನ ಪ್ರತಿಯೊಂದು ಭಾಗವನ್ನು ದೇವದಾರು ಮರದ ಹಲಗೆಗಳಿಂದ ಹೊದಿಸಿದನು.
10. ಸೊಲೊಮೋನನು ದೇವಾಲಯದ ಸುತ್ತಲಿನ ಕೊಠಡಿಗಳ ನಿರ್ಮಾಣವನ್ನೂ ಮುಗಿಸಿದನು. ಒಂದೊಂದು ಅಂತಸ್ತು ಏಳೂವರೆ ಅಡಿಗಳಷ್ಟು ಎತ್ತರವಾಗಿತ್ತು. ಈ ಕೊಠಡಿಗಳ ದೇವದಾರು ತೊಲೆಗಳು ದೇವಾಲಯವನ್ನು ಸ್ಪರ್ಶಿಸುತ್ತ್ತಿದ್ದವು. [PE]
11. [PS](11-12)ಯೆಹೋವನು ಸೊಲೊಮೋನನಿಗೆ, “ನನ್ನ ಎಲ್ಲಾ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ನೀನು ವಿಧೇಯನಾಗಿದ್ದರೆ, ನಿನ್ನ ತಂದೆಯಾದ ದಾವೀದನಿಗೆ ನಾನು ವಾಗ್ದಾನ ಮಾಡಿದವುಗಳನ್ನು ನಿನಗಾಗಿ ಈಡೇರಿಸುತ್ತೇನೆ.
12.
13. ನೀನು ನಿರ್ಮಿಸುತ್ತಿರುವ ಈ ದೇವಾಲಯದಲ್ಲಿ ನಾನು ಇಸ್ರೇಲರೊಂದಿಗೆ ವಾಸಿಸುತ್ತೇನೆ. ನಾನು ಅವರನ್ನು ಎಂದೆಂದಿಗೂ ಬಿಟ್ಟುಹೋಗುವುದಿಲ್ಲ” ಎಂದು ಹೇಳಿದನು. [PE]
14. [PS]ಸೊಲೊಮೋನನು ದೇವಾಲಯದ ನಿರ್ಮಾಣವನ್ನು ಮುಗಿಸಿದನು.
15. ದೇವಾಲಯದ ಒಳಗಿನ ಗೋಡೆಗಳಿಗೆ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಕಲ್ಲಿನ ನೆಲಕ್ಕೆ ತುರಾಯಿ ಮರದ ಹಲಗೆಗಳನ್ನು ಹಾಸಿದ್ದರು.
16. ದೇವಾಲಯದ ಹಿಂಭಾಗದಲ್ಲಿ ಅವರು ಮೂವತ್ತು ಅಡಿ ಉದ್ದವಾಗಿರುವ ಒಂದು ಕೊಠಡಿಯನ್ನು ನಿರ್ಮಿಸಿದ್ದರು. ಈ ಕೊಠಡಿಯ ಗೋಡೆಗಳಿಗೂ ದೇವದಾರು ಮರದ ಹಲಗೆಗಳನ್ನು ನೆಲದಿಂದ ಮಾಳಿಗೆಯವರೆಗೆ ಹೊದಿಸಿದ್ದರು. ಈ ಕೊಠಡಿಯನ್ನು ಮಹಾ ಪವಿತ್ರಸ್ಥಳವೆಂದು ಕರೆದರು.
17. ಈ ಮಹಾ ಪವಿತ್ರಸ್ಥಳದ ಎದುರಿನಲ್ಲಿ ದೇವಾಲಯದ ಮುಖ್ಯ ಭಾಗವಿದೆ. ಈ ಕೊಠಡಿಯ ಉದ್ದ ಅರವತ್ತು ಅಡಿ.
18. ಈ ಕೊಠಡಿಯ ಗೋಡೆಗಳಿಗೆ ದೇವದಾರು ಮರದ ಹೊದಿಕೆಗಳನ್ನು ಹೊದಿಸಲಾಗಿದ್ದು ಈ ಗೋಡೆಗಳಲ್ಲಿದ್ದ ಯಾವುದೇ ಕಲ್ಲುಗಳು ಕಂಡುಬರುತ್ತಿರಲಿಲ್ಲ. ಈ ದೇವದಾರು ಮರದ ಹಲಗೆಗಳ ಮೇಲೆ ಹೂಗಳ ಮತ್ತು ಬಳ್ಳಿಗಳ ಚಿತ್ರಗಳನ್ನು ಕೆತ್ತಲಾಗಿತ್ತು. [PE]
19. [PS]ಸೊಲೊಮೋನನು ದೇವಾಲಯದ ಹಿಂದಿನ ಭಾಗದಲ್ಲಿ ಒಳಗಡೆ ಒಂದು ಕೋಣೆಯನ್ನು ಸಿದ್ಧಪಡಿಸಿದನು. ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡುವುದಕ್ಕಾಗಿಯೇ ಈ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು.
20. ಈ ಕೊಠಡಿಯು ಮೂವತ್ತು ಅಡಿ ಉದ್ದ ಮೂವತ್ತು ಅಡಿ ಅಗಲ ಮತ್ತು ಮೂವತ್ತು ಅಡಿ ಎತ್ತರವಾಗಿತ್ತು.
21. ಸೊಲೊಮೋನನು ಶುದ್ಧ ಚಿನ್ನದ ತಗಡನ್ನು ಈ ಕೊಠಡಿಗೆ ಹೊದಿಸಿದನು. ಈ ಕೊಠಡಿಯ ಮುಂದೆ ಧೂಪವೇದಿಕೆಯನ್ನು ಅವನು ನಿರ್ಮಿಸಿದನು. ಅವನು ಆ ವೇದಿಕೆಗೆ ಚಿನ್ನದ ಹೊದಿಕೆಯನ್ನೂ ಅದರ ಸುತ್ತಲೂ ಚಿನ್ನದ ಸರಪಣಿಗಳನ್ನೂ ಜೋಡಿಸಿದನು. ಆ ಕೊಠಡಿಯಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳಿದ್ದವು. ಆ ಪ್ರತಿಮೆಗಳಿಗೆ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು.
22. ದೇವಾಲಯಕ್ಕೆಲ್ಲ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. ಅಲ್ಲದೆ, ಮಹಾ ಪವಿತ್ರಸ್ಥಳದ ಮುಂದಿನ ಯಜ್ಞವೇದಿಕೆಗೂ ಚಿನ್ನದ ಹೊದಿಕೆಯನ್ನು ಹೊದಿಸಿದ್ದರು. [PE]
23. [PS]ಕೆಲಸಗಾರರು ರೆಕ್ಕೆಗಳಿರುವ ಎರಡು ಕೆರೂಬಿಗಳ ಪ್ರತಿಮೆಗಳನ್ನು ಆಲೀವ್ ಮರದಿಂದ ಮಾಡಿ ಅವುಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಒಂದೊಂದು ಪ್ರತಿಮೆಯು ಹದಿನೈದು ಅಡಿ ಎತ್ತರವಾಗಿತ್ತು.
24. (24-26)ಈ ಎರಡು ಕೆರೂಬಿಗಳು ಅಳತೆಯಲ್ಲಿಯೂ ಆಕಾರದಲ್ಲಿಯೂ ಒಂದೇ ರೀತಿಯಾಗಿದ್ದವು. ಪ್ರತಿಯೊಂದು ಕೆರೂಬಿಗಳಿಗೆ ಎರಡು ರೆಕ್ಕೆಗಳಿದ್ದವು. ಪ್ರತಿಯೊಂದು ರೆಕ್ಕೆಯ ಉದ್ದ ಏಳುವರೆ ಅಡಿಗಳು. ಒಂದು ರೆಕ್ಕೆಯಿಂದ ಮತ್ತೊಂದು ರೆಕ್ಕೆಯ ಕೊನೆಗಿರುವ ಅಂತರ ಹದಿನೈದು ಅಡಿಗಳು. ಪ್ರತಿಯೊಂದು ಕೆರೂಬಿಯ ಎತ್ತರ ಹದಿನೈದು ಅಡಿಗಳು.
25.
26.
27. ಈ ಕೆರೂಬಿಗಳನ್ನು ಮಹಾಪವಿತ್ರ ಸ್ಥಳದಲ್ಲಿಟ್ಟರು. ಅವುಗಳು ಒಂದಕ್ಕೊಂದು ಸಮೀಪದಲ್ಲಿದ್ದವು. ಅವುಗಳ ರೆಕ್ಕೆಗಳು ಕೊಠಡಿಯ ಮಧ್ಯಭಾಗದಲ್ಲಿ ಒಂದನ್ನೊಂದು ತಾಕುತ್ತಿದ್ದುವು. ಉಳಿದೆರಡು ರೆಕ್ಕೆಗಳು ಎರಡು ಕಡೆಗಳಲ್ಲಿದ್ದ ಗೋಡೆಗಳನ್ನು ತಾಕುತ್ತಿದ್ದುವು.
28. ಈ ಎರಡು ಕೆರೂಬಿಗಳಿಗೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. [PE]
29. [PS]ಮುಖ್ಯಕೊಠಡಿಯ ಮತ್ತು ಒಳಕೋಣೆಯ ಗೋಡೆಗಳ ಮೇಲೆ ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಕೆತ್ತಿದ್ದರು.
30. ಈ ಎರಡು ಕೊಠಡಿಗಳ ನೆಲಕ್ಕೆ ಚಿನ್ನದ ತಗಡನ್ನು ಹಾಸಿದ್ದರು. [PE]
31. [PS]ಕೆಲಸಗಾರರು ಆಲೀವ್ ಮರದ ಎರಡು ಬಾಗಿಲುಗಳನ್ನು ಮಾಡಿದರು. ಅವರು ಮಹಾಪವಿತ್ರ ಸ್ಥಳದ ಪ್ರವೇಶದ್ವಾರದಲ್ಲಿ ಈ ಎರಡು ಬಾಗಿಲುಗಳನ್ನು ಇಟ್ಟರು. ಬಾಗಿಲಿನ ಚೌಕಟ್ಟನ್ನು ಪಂಚಕೋಣಾಕೃತಿಯಲ್ಲಿ ಮಾಡಿದ್ದರು.
32. ಅವರು ಆಲೀವ್ ಮರದಿಂದ ಎರಡು ಬಾಗಿಲುಗಳನ್ನು ಮಾಡಿದರು. ಕೆಲಸಗಾರರು ಕೆರೂಬಿಗಳ, ಖರ್ಜೂರ ವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದರು. ನಂತರ ಬಾಗಿಲುಗಳಿಗೆ ಚಿನ್ನವನ್ನು ಹೊದಿಸಿದರು. [PE]
33. [PS]ಅವರು ಮುಖ್ಯ ಕೊಠಡಿಯ ಪ್ರವೇಶಕ್ಕೂ ಬಾಗಿಲುಗಳನ್ನು ಮಾಡಿದರು. ಅವರು ಚೌಕಾಕಾರದ ಬಾಗಿಲಿನ ಚೌಕಟ್ಟನ್ನು ಆಲೀವ್ ಮರದಿಂದ ಮಾಡಿದರು.
34. ನಂತರ ಅವರು ತುರಾಯಿ ಮರದ ಬಾಗಿಲುಗಳನ್ನು ಮಾಡಿದರು. ಅಲ್ಲಿ ಎರಡು ಬಾಗಿಲುಗಳಿದ್ದು, ಪ್ರತಿಯೊಂದೂ ಮಡಿಸುವಂತಹ ಎರಡು ಭಾಗಗಳನ್ನು ಹೊಂದಿದ್ದವು.
35. ಅವರು ಕೆರೂಬಿಗಳ, ಖರ್ಜೂರವೃಕ್ಷಗಳ ಮತ್ತು ಹೂಗಳ ಚಿತ್ರಗಳನ್ನು ಬಾಗಿಲುಗಳ ಮೇಲೆ ಕೆತ್ತಿದ್ದರು. ಅವರು ಅವುಗಳಿಗೆ ಚಿನ್ನವನ್ನು ಹೊದಿಸಿದರು. [PE]
36.
37. [PS]ನಂತರ ಅವರು ಒಳಾಂಗಣವನ್ನು ನಿರ್ಮಿಸಿದರು. ಅವರು ಒಳಾಂಗಣದ ಸುತ್ತಲೂ ಗೋಡೆಗಳನ್ನು ನಿರ್ಮಿಸಿದರು. ಪ್ರತಿಯೊಂದು ಗೋಡೆಯು ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನೂ ದೇವದಾರುಮರದ ತೊಲೆಗಳ ಒಂದು ಸಾಲನ್ನೂ ಹೊಂದಿತ್ತು. [PE][PS]ಅವರು ವರ್ಷದ ಎರಡನೆಯ ತಿಂಗಳಿನ ಜೀವ್ (ವೈಶಾಖ) ಮಾಸದಲ್ಲಿ ದೇವಾಲಯವನ್ನು ಕಟ್ಟಲಾರಂಭಿಸಿದರು. ಇಸ್ರೇಲನ್ನು ಸೊಲೊಮೋನನು ಆಳಲು ಆರಂಭಿಸಿದ ನಾಲ್ಕನೆಯ ವರ್ಷದಲ್ಲಿ ಇದು ನಡೆಯಿತು.
38. ಈ ದೇವಾಲಯದ ನಿರ್ಮಾಣವು ವರ್ಷದ ಎಂಟನೇ ತಿಂಗಳಾದ ಬುಲ್ (ಕಾರ್ತಿಕ) ತಿಂಗಳಲ್ಲಿ ಮುಗಿಯಿತು. ಅದು ಸೊಲೊಮೋನನ ಆಳ್ವಿಕೆಯ ಹನ್ನೊಂದನೆಯ ವರ್ಷವಾಗಿತ್ತು. ದೇವಾಲಯವನ್ನು ಕಟ್ಟಲು ಏಳು ವರ್ಷ ಹಿಡಿಯಿತು. ದೇವಾಲಯವನ್ನು ಅದರ ನಿಯಮಾನುಸಾರವಾಗಿ ಕಟ್ಟಿದರು. [PE]