1. {#1ಜ್ಞಾನ ವಿವೇಕಗಳ ಪ್ರಾಮುಖ್ಯತೆ } [PS]ಮಕ್ಕಳೇ, ನಿಮ್ಮ ತಂದೆಯ ಉಪದೇಶಗಳಿಗೆ ಕಿವಿಗೊಡಿ, ಗಮನವಿಟ್ಟು ಅರ್ಥಮಾಡಿಕೊಳ್ಳಿರಿ.
2. ನನ್ನ ಉಪದೇಶಗಳು ಸದುಪದೇಶಗಳಾಗಿರುವುದರಿಂದ ಅವುಗಳನ್ನು ಎಂದಿಗೂ ಮರೆಯಬೇಡಿ. [PE]
3. [PS]ನಾನು ನನ್ನ ತಂದೆಗೆ ಚಿಕ್ಕ ಮಗನಾಗಿದ್ದೆ. ನನ್ನ ತಾಯಿಗೆ ನಾನೊಬ್ಬನೇ ಮಗನು.
4. ನನ್ನ ತಂದೆ ನನಗೆ ಉಪದೇಶ ಮಾಡಿದ್ದೇನೆಂದರೆ: “ನನ್ನ ಮಾತುಗಳನ್ನು ನೆನಪುಮಾಡಿಕೊ; ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಬದುಕುವೆ.
5. ಜ್ಞಾನವನ್ನು ಮತ್ತು ವಿವೇಕವನ್ನು ಪಡೆದುಕೋ! ನನ್ನ ಮಾತುಗಳನ್ನು ಮರೆಯಬೇಡ. ಯಾವಾಗಲೂ ನನ್ನ ಉಪದೇಶಗಳನ್ನು ಅನುಸರಿಸು.
6. ಜ್ಞಾನವನ್ನು ಬಿಟ್ಟು ಬೇರೆ ಕಡೆಗೆ ತಿರುಗಿಕೊಳ್ಳಬೇಡ. ಆಗ ಅದು ನಿನ್ನನ್ನು ಕಾಪಾಡುವುದು. ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಕಾಪಾಡುವುದು.” [PE]
7. [PS]“ಜ್ಞಾನವನ್ನು ಪಡೆಯಲು ನೀನು ನಿರ್ಧರಿಸಿದಾಗಲೇ ಜ್ಞಾನವು ನಿನ್ನಲ್ಲಿ ಆರಂಭವಾಗುತ್ತದೆ. ಆದ್ದರಿಂದ ವಿವೇಕವನ್ನು ಪಡೆಯಲು ನಿನಗಿರುವದನ್ನೆಲ್ಲಾ ಉಪಯೋಗಿಸು. ಆಗ ನೀನು ವಿವೇಕಿಯಾಗುವೆ.
8. ಜ್ಞಾನವನ್ನು ಪ್ರೀತಿಸು, ಆಗ ಅದು ನಿನ್ನನ್ನು ಉನ್ನತಸ್ಥಾನಕ್ಕೆ ತರುವುದು. ಜ್ಞಾನವನ್ನು ಅಪ್ಪಿಕೊ; ಆಗ ಅದು ನಿನಗೆ ಸನ್ಮಾನವನ್ನು ತರುವುದು.
9. ಅದು ನಿನಗೆ ಅಂದವಾದ ಪುಷ್ಪಮಾಲೆಯಂತೆಯೂ ಸುಂದರವಾದ ಕಿರೀಟದಂತೆಯೂ ಇರುವುದು.” [PE]
10. [PS]ಮಗನೇ, ನನ್ನ ಮಾತನ್ನು ಕೇಳು. ನಾನು ಹೇಳಿದಂತೆ ಮಾಡು, ಆಗ ನೀನು ಬಹುಕಾಲ ಬದುಕುವೆ.
11. ನಾನು ನಿನಗೆ ಜ್ಞಾನದ ಕುರಿತು ಉಪದೇಶಿಸುತ್ತಿರುವೆನು. ನಾನು ನಿನ್ನನ್ನು ಧರ್ಮದ ಮಾರ್ಗದಲ್ಲಿ ನಡೆಸುತ್ತಿರುವೆನು.
12. ಈ ದಾರಿಯಲ್ಲೇ ಹೋಗು, ಆಗ ನಿನ್ನ ಕಾಲುಗಳು ಇಕ್ಕಟ್ಟಿಗೆ ಸಿಕ್ಕಿಕೊಳ್ಳುವುದಿಲ್ಲ. ನೀನು ಓಡಿದರೂ ಮುಗ್ಗರಿಸುವುದಿಲ್ಲ.
13. ಈ ಉಪದೇಶಗಳನ್ನು ಯಾವಾಗಲೂ ನೆನಪುಮಾಡಿಕೊ; ಮರೆತುಬಿಡಬೇಡ. ಅವು ನಿನಗೆ ಜೀವವಾಗಿವೆ! [PE]
14. [PS]ಕೆಡುಕರ ಮಾರ್ಗದಲ್ಲಿ ನಡೆಯಬೇಡ. ಅವರಂತೆ ಜೀವಿಸಬೇಡ.
15. ದುಷ್ಟತನಕ್ಕೆ ದೂರವಾಗಿರು. ಅದರ ಬಳಿಗೆ ಹೋಗಬೇಡ. ನೇರವಾಗಿ ನಡೆದು ಅದರಿಂದ ದೂರವಾಗು.
16. ಏನಾದರೂ ಕೇಡುಮಾಡದಿದ್ದರೆ ಕೆಡುಕರಿಗೆ ನಿದ್ರೆಬಾರದು. ಯಾರಿಗಾದರೂ ನೋವು ಮಾಡದೆ ಅವರು ನಿದ್ರಿಸಲಾರರು.
17. ಅವರು ಬೇರೆಯವರಿಗೆ ಕೇಡನ್ನಾಗಲಿ ನೋವನ್ನಾಗಲಿ ಮಾಡದೆ ಜೀವಿಸಲಾರರು. ಅದೇ ಅವರ ಆಹಾರ ಮತ್ತು ಪಾನೀಯ. [PE]
18. [PS]ನೀತಿವಂತರ ಜೀವಿತವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಮುಂಜಾನೆಯ ಬೆಳಕಿನಂತಿರುವುದು.
19. ಆದರೆ ದುಷ್ಟರ ಜೀವಿತವು ರಾತ್ರಿಯ ಕತ್ತಲೆಯಂತಿದೆ. ಅವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದು ತಮಗೆ ಕಾಣದ ವಸ್ತುಗಳ ಮೇಲೆ ಎಡವಿ ಬೀಳುತ್ತಾರೆ. [PE]
20. [PS]ನನ್ನ ಮಗನೇ, ನನ್ನ ಮಾತುಗಳಿಗೆ ಗಮನಕೊಡು. ನನ್ನ ನುಡಿಗಳಿಗೆ ಕಿವಿಗೊಡು.
21. ನಿನ್ನ ದೃಷ್ಟಿಯು ಅವುಗಳ ಮೇಲಿರಲಿ, ಅವುಗಳನ್ನು ನಿನ್ನ ನೆನಪಿನಲ್ಲಿಟ್ಟುಕೊ.
22. ನನ್ನ ಉಪದೇಶಕ್ಕೆ ಕಿವಿಗೊಡುವವರು ಜೀವವನ್ನು ಹೊಂದಿಕೊಳ್ಳುವರು. ನನ್ನ ಮಾತುಗಳು ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತವೆ.
23. ನಿನ್ನ ಆಲೋಚನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಿನ್ನ ನಡತೆಯು ನಿನ್ನ ಆಲೋಚನೆಗಳ ಮೇಲೆ ಆಧಾರಗೊಂಡಿದೆ. [PE]
24. [PS]ಸತ್ಯವನ್ನು ಸೊಟ್ಟಗೆ ಮಾಡದಿರು; ಸುಳ್ಳನ್ನೂ ಹೇಳದಿರು.
25. ಒಳ್ಳೆಯದನ್ನೇ ದೃಷ್ಟಿಸು; ನಿನ್ನ ನೋಟವನ್ನು ನಿನ್ನ ಗುರಿಯ ಮೇಲೆ ಕೇಂದ್ರೀಕರಿಸು.
26. ನಿನ್ನ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡು; ಆಗ ನಿನ್ನ ಜೀವನವು ದೃಢವಾಗಿರುವುದು.
27. ಒಳ್ಳೆಯ ಮಾರ್ಗವನ್ನು ಬಿಟ್ಟು ಹೋಗಬೇಡ; ಆದರೆ ಕೆಡುಕಿಗೆ ಯಾವಾಗಲೂ ದೂರವಾಗಿರು. [PE]